ನರೇಗಲ್ಲ ಫೆ.೩- ಕೋಡಿಕೊಪ್ಪದಲ್ಲಿ ಜನನ ತಾಳಿದ ಶ್ರೀ ವೀರಪ್ಪಜ್ಜನವರದು ಅಪರೂಪದ ಅವತಾರ. ಇಂಥವರು ಇಲ್ಲಿ ಜನಿಸಬೇಕೆಂದರೆ ಅದಕ್ಕೆ ಭೂಮಿಯ ಋಣ, ಮನೆತನದ ಪುಣ್ಯ ಮತ್ತು ತಂದೆ-ತಾಯಿಗಳ ಪುಣ್ಯವೂ ಸೇರಿದಾಗ ಮಾತ್ರ ಇಂತಹ ವ್ಯಕ್ತಿಗಳು ಭೂಮಿಯ ಮೇಲೆ ಅವತರಿಸಲು ಸಾಧ್ಯವಾಗುತ್ತದೆ ಎಂದು ಕೊತಬಾಳ ಅಂಕಲಿ ಮಠದ ಅಡವಿಸಿದ್ಧೇಶ್ವರ ಮಹಾಸ್ವಾಮಿಗಳವರು ಹೇಳಿದರು.
ಅವರು ಕೋಡಿಕೊಪ್ಪದ ಶ್ರೀ ವೀರಪ್ಪಜ್ಜನವರ ಪುಣ್ಯಾರಾಧನೆ ಶತಮಾನೋತ್ಸವದ ನಾಲ್ಕನೆ ದಿನದ ಶ್ರೀ ವೀರಪ್ಪಜ್ಜನವರ ಜೀವನ ದರ್ಶನ ಪುರಾಣದ ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.
ಶ್ರೀ ವೀರಪ್ಪಜ್ಜನವರು ಲಿಂಗೈಕ್ಯರಾಗಿ ನೂರು ವರ್ಷಗಳು ಕಳೆದರೂ ಇಂದಿಗೂ ನಾವುಗಳು ಅವರನ್ನು ಸ್ಮರಿಸುತ್ತಿದ್ದೇವೆ ಎಂದರೆ ಅವರ ಆಧ್ಯಾತ್ಮಿಕ ವ್ಯಕ್ತಿತ್ವ ಎಷ್ಟು ಎತ್ತರದಲ್ಲಿತ್ತು ಎಂಬುದು ತಿಳಿದು ಬರುತ್ತದೆ. ಇಂತಹ ಮಹಿಮಾ ಪುರುಷನ ಶತಮಾನೋತ್ಸವದಲ್ಲಿ ಪಾಲ್ಗೊಂಡಿರುವುದು ನಮ್ಮೆಲ್ಲರ ಪುಣ್ಯ ವಿಶೇಷ ಎಂದರು.
ಜೋಳಿಗೆಯ ಮೂಲಕವೇ ಈ ನಾಡಿನಲ್ಲಿ ಮೊತ್ತ ಮೊದಲ ಬಾರಿಗೆ ಸಾಮೂಹಿಕ ವಿವಾಹ ನೆರವೇರಿಸಿದವರು ಕೊತಬಾಳದ ಶ್ರೀ ರಾಜಶೇಖರ ಮಹಾಸ್ವಾಮಿಗಳು. ಅಂದು ನಮ್ಮ ಮಠ ನೀಡಿದ ಈ ಯೋಜನೆಯನ್ನು ಈಗ ನಾಡಿನ ಎಲ್ಲ ಮಠಮಾನ್ಯಗಳೂ ಅಳವಡಿಸಿಕೊಂಡು ಮುನ್ನಡೆಯುತ್ತಿರುವುದು ಸಂತಸದ ಸಂಗತಿ. ಈ ಶತಮಾನೋತ್ಸವದ ಸಂದರ್ಭದಲ್ಲಿಯೂ ಸಹ ಫೆ. ೬ರಂದು ೫ ಜೊತೆ ಸಂಪೂರ್ಣ ಉಚಿತ ಸಾಮೂಹಿಕ ವಿವಾಹಗಳು ನಡೆಯುತ್ತಿರುವುದು ನಮಗೆ ವಿಶೇಷ ಆನಂದವನ್ನುಂಟು ಮಾಡಿದೆ ಎಂದು ಶ್ರೀಗಳು ಹೇಳಿದರು.
ಸಿದ್ದನಕೊಳ್ಳದ ಧರ್ಮಾಧಿಕಾರಿ ಡಾ. ಶಿವಕುಮಾರ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಭಕ್ತರು ಬೆಳೆಸಿದಾಗ ಮಾತ್ರ ಮಠ ಮತ್ತು ಸ್ವಾಮಿಗಳು ಬೆಳೆಯಲು ಸಾಧ್ಯವಾಗುತ್ತದೆ. ಹುಚ್ಚರಾಗಿದ್ದೂ ಜಗದ ಅಂಧಕಾರವನ್ನು ದೂರ ಮಾಡಿದವರು ವೀರಪ್ಪಜ್ಜನವರು. ವೇದಗಳನ್ನು ಓದಿದವರು ದೊಡ್ಡವರಲ್ಲ, ಜನರ ವೇದನೆಯನ್ನು ಅರ್ಥ ಮಾಡಿಕೊಂಡು ಪರಿಹಾರ ನೀಡುವವರು ದೊಡ್ಡವರು. ಭವಿಷ್ಯ ಹೇಳುವುದು ಮುಖ್ಯವಲ್ಲ, ಜನರ ಭವಿಷ್ಯವನ್ನು ರೂಪಿಸುವವರು ದೊಡ್ಡವರು ಎಂದು ಶಿವಕುಮಾರಸ್ವಾಮಿ ಹೇಳಿದರು.
ಡಾ. ವಿಶ್ವನಾಥ ಮಹಾಸ್ವಾಮಿಗಳು ವೀರಪ್ಪಜ್ಜನವರ ಜೀವನ ದರ್ಶನ ಪುರಾಣ ಪ್ರವಚನ ನೀಡಿದರು. ಸಮಾರಂಭದಲ್ಲಿ ದಾನಿಗಳನ್ನು ಮತ್ತು ಶ್ರೀಮಠಕ್ಕೆ ನಿರಂತರ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು. ಧಾರವಾಡದ ಭಾಗ್ಯಶ್ರೀ ಭರತನಾಟ್ಯ ಪ್ರದರ್ಶಿಸಿದರು, ಗೀತಾ ಭೋಪಳಾಪೂರ ಪ್ರಾರ್ಥನಾ ಗೀತೆ ಹಾಡಿದರು. ಪ್ರಭುಸ್ವಾಮಿ ಅರವಟಗಿಮಠ ನಿರೂಪಿಸಿದರು, ಡಾ. ಎಲ್.ಎಸ್. ಗೌರಿ ಸ್ವಾಗತಿಸಿದರು.
ಫೆ.೦೩-ಎನ್‌ಆರ್‌ಜಿಎಲ್೩- ಕೋಡಿಕೊಪ್ಪದ ಶ್ರೀ ವೀರಪ್ಪಜ್ಜನವರ ಪುಣ್ಯಾರಾಧನೆ ಶತಮಾನೋತ್ಸವದ ನಾಲ್ಕನೆ ದಿನದ ಶ್ರೀ ವೀರಪ್ಪಜ್ಜನವರ ಜೀವನ ದರ್ಶನ ಪುರಾಣದಲ್ಲಿ ಡಾ. ಶಿವಕುಮಾರ ಕಂಬಾಳಿಮಠ ಆಶೀರ್ವಚನ ನೀಡಿದರು.
More Stories
ಮಾಹಿತಿ ಹಕ್ಕು ಕಾಯ್ದೆ ಪಾವಿತ್ರ್ಯ ಕಾಪಾಡುವ ಜವಾಬ್ದಾರಿ ನಿಮ್ಮ ಮೇಲಿದೆ: ಕೆ.ವಿ.ಪಿ
ಕನ್ನಡ ಬಾರದ ಸಚಿವ ತಂಗಡಗಿಯವರನ್ನು ಸಚಿವ ಸ್ಥಾನದಿಂದ ಕಿತ್ತಿ ಹಾಕಿಃ ಅರ್ಜುನ್ ನಾಯಕ
ಕಣ್ವ ಜಲಾಶಯದಲ್ಲಿ ಡಿಸಿಎಂ ಡಿಕೆಶಿ ಬೋಟ್ ರೈಡ್.!